ಕನೊಪನಿಕ್, ಮರ್ಯ : 1842-1910. ಪೋಲೆಂಡಿನ ಕವಯಿತ್ರಿ ಮತ್ತು ಕತೆಗಾರ್ತಿ. ತಾರುಣ್ಯದಲ್ಲಿ ರೈತರ ಹಾಗೂ ನಗರವಾಸಿ ಕಾರ್ಮಿಕರ ಕಷ್ಟಕಾರ್ಪಣ್ಯಗಳನ್ನು ಚಿತ್ರಿಸಿ ಪದ್ಯಗಳನ್ನು ಬರೆದಳು. ನಾನಾ ರೀತಿಯ ಸನ್ನಿವೇಶಗಳಿಗೆ ತನ್ನ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸುವ ಕವನಗಳನ್ನು ವಿವಿಧ ಶೈಲಿಗಳಲ್ಲೂ ಛಂದಸ್ಸುಗಳಲ್ಲೂ ರಚಿಸಿದಳು. ಅವಳ ಕೃತಿಗಳಲ್ಲಿ ಇಟಾಲಿಯ ಕಾವ್ಯವೃತ್ತ ಎಂಬ ಹೆಸರಿನ ಪ್ರೇಮಗೀತಗಳು ಸುಂದರವಾಗಿವೆ. ವರ್ಣನೆಯ ಕಲೆ ಇವಳಿಗೆ ಸಿದ್ಧಿಸಿತ್ತು. ಇವಳ ಪದ್ಯಗಳಲ್ಲಿ ಚಿತ್ತೈಕಾಗ್ರತೆ, ಆತ್ಮಸಂಯಮ ಸಾಲದು. ಆದರೆ ಇವಳ ಸಣ್ಣಕಥೆಗಳು- ಜರ್ಮನರು, ನಮ್ಮ ನಾಗ್, ಪಟ್ಟಣಿಗರು ಮುಂತಾದುವು ಈ ಅಪವಾದಕ್ಕೆ ಹೊರತಾಗಿವೆ. ಬ್ರೆಜಿûಲ್ ದೇಶಕ್ಕೆ ಪೋಲೆಂಡಿನಿಂದ ವಲಸೆ ಹೋದವರು ಅಲ್ಲಿನ ಕಾಡುಮೇಡುಗಳಲ್ಲಿ ಅನುಭವಿಸಿದ ಕಷ್ಟನಷ್ಟಗಳನ್ನೇ ಪ್ರಧಾನ ವಸ್ತುವಾಗಿಟ್ಟುಕೊಂಡು ಬ್ರೆಜಿûಲ್ನಲ್ಲಿ ಪಾನ್ ಬಾಲ್ಜರ್ ಎಂಬ ಮಹಾಕಾವ್ಯವನ್ನು 1910ರಲ್ಲಿ ರಚಿಸಿದಳು. ಜನತೆಯ ಸಾಮಾಜಿಕ ಹಕ್ಕುಗಳಿಗಾಗಿ ಹೊಡೆದಾಡಿದ ಈಕೆಯ ಬರಹಗಳಲ್ಲಿ ಸಾಮಾಜಿಕ ನ್ಯಾಯವೇ ಪ್ರಧಾನ ಗುಣ.	(ಎಲ್.ಎಸ್.ಎಸ್.; ಟಿ.ವಿ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ